ನಾರ್ತ್ ಬ್ಲಾಕ್ ಮೇಲೆ ಕಪ್ಪು ಹೊಗೆ… ರೈಸಿನಾ ಹಿಲ್ನಲ್ಲಿ ಕೆಲಕಾಲ ಆತಂಕದ ಉಸಿರು

ಬೆಳಗ್ಗೆ, ಅಕ್ಟೋಬರ್ 26ರಂದು, ದೆಹಲಿಯ ಅಧಿಕಾರದ ಹೃದಯ ಎನಿಸಿದ ರೈಸಿನಾ ಹಿಲ್ನ ಆಕಾಶದಲ್ಲಿ ದಟ್ಟ ಕಪ್ಪು ಹೊಗೆ ಸುರುಳಿ ಸುತ್ತಿಕೊಂಡು ಮೇಲೇರಿತು. ನಾರ್ತ್ ಬ್ಲಾಕ್ನ ಗುಮ್ಮಟದ ಹಿಂದಿನಿಂದ ಏಳುತ್ತಿದ್ದ ಆ ಹೊಗೆಯನ್ನು ಕಂಡ ಕ್ಷಣವೇ ಸುತ್ತಮುತ್ತಲಿನವರಲ್ಲಿ ಆತಂಕ ಮನೆಮಾಡಿತು. ದೇಶದ ಆಡಳಿತದ ಪ್ರಮುಖ ಕಟ್ಟಡಗಳಲ್ಲಿ ಒಂದಾದ ನಾರ್ತ್ ಬ್ಲಾಕ್ನ ಛಾವಣಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ದೆಹಲಿ ಅಗ್ನಿಶಾಮಕ ಸೇವೆಗೆ ಸುಮಾರು ಬೆಳಗ್ಗೆ 11 ಗಂಟೆ 10 ನಿಮಿಷದ ಹೊತ್ತಿಗೆ ಕರೆ ಬಂತು. ತಕ್ಷಣವೇ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ನಂದಿಸಿದರು.
ಅಗ್ನಿಶಾಮಕ ಇಲಾಖೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಛಾವಣಿಯಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದಾಗ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಅಲ್ಲಿದ್ದ ಎಸಿ ಬಾಯ್ಲರ್ ಒಂದಕ್ಕೆ ಬೆಂಕಿ ತಗುಲಿದೆ ಎನ್ನಲಾಗಿದೆ. ಕಟ್ಟಡದೊಳಗೆ ಕೆಲವು ಭಾಗಗಳನ್ನು ಕಳಚುವ ಕೆಲಸವೂ ಆ ಹೊತ್ತಿನಲ್ಲಿ ನಡೆಯುತ್ತಿತ್ತು ಎಂದು ವರದಿಗಳು ಹೇಳುತ್ತವೆ. ಆದರೆ ಇದು ಆರಂಭಿಕ ಅಂದಾಜು ಮಾತ್ರ. ಬೆಂಕಿಗೆ ನಿಖರ ಕಾರಣ ಏನು, ಛಾವಣಿಯ ಯಂತ್ರೋಪಕರಣಗಳಿಗೆ ಎಷ್ಟು ಹಾನಿಯಾಗಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಹೊಗೆ ಮೊದಲು ಕಣ್ಣಿಗೆ ಬಿದ್ದವರಲ್ಲಿ ರಾಜ್ಯಸಭಾ ಸದಸ್ಯ ಮಿಲಿಂದ್ ದೇವ್ರಾ ಕೂಡ ಒಬ್ಬರು. ಸಂಸತ್ತಿನತ್ತ ತೆರಳುತ್ತಿದ್ದಾಗ ನಾರ್ತ್ ಬ್ಲಾಕ್ನ ಹಿಂದಿನಿಂದ ದಟ್ಟ ಹೊಗೆ ಏಳುತ್ತಿರುವುದನ್ನು ಕಂಡ ಅವರು, “ಎಲ್ಲರೂ ಸುರಕ್ಷಿತವಾಗಿರಲಿ, ತುರ್ತು ಸೇವೆಗಳು ಶೀಘ್ರವಾಗಿ ಸ್ಪಂದಿಸುತ್ತಿವೆ ಎಂದು ಆಶಿಸುತ್ತೇನೆ” ಎಂದು ಎಕ್ಸ್ನಲ್ಲಿ ಬರೆದುಕೊಂಡರು.
ಕೆಲವೇ ನಿಮಿಷಗಳಲ್ಲಿ ಹೊಗೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು.ದಶಕಗಳ ಕಾಲ ಗೃಹ ಮತ್ತು ಹಣಕಾಸು ಸಚಿವಾಲಯಗಳ ನೆಲೆಯಾಗಿದ್ದ, ದೇಶದ ಮಹತ್ವದ ನಿರ್ಧಾರಗಳಿಗೆ ಸಾಕ್ಷಿಯಾದ ಕಟ್ಟಡವದು. ಅಂತಹ ಕಡೆ ಸಣ್ಣ ಕಿಡಿಯೂ ದೊಡ್ಡ ಸುದ್ದಿಯೇ. ಅದೃಷ್ಟವಶಾತ್ ಈ ಬಾರಿ ಕಿಡಿ ಕಿಚ್ಚಾಗಿ ಹಬ್ಬುವ ಮೊದಲೇ ಅಗ್ನಿಶಾಮಕ ಸಿಬ್ಬಂದಿ ತಣ್ಣಗಾಗಿಸಿದರು.
ಹೊಗೆ ಕರಗಿದೆ, ಆತಂಕವೂ ಕರಗಿದೆ. ಆದರೆ ಪಾರಂಪರಿಕ ಕಟ್ಟಡಗಳಲ್ಲಿ ನಡೆಯುವ ದುರಸ್ತಿ ಕೆಲಸಗಳಲ್ಲಿ ಸುರಕ್ಷತೆಯ ಬಗ್ಗೆ ಇನ್ನಷ್ಟು ಎಚ್ಚರ ಬೇಕು ಎಂಬ ಪಾಠವನ್ನು ಈ ಘಟನೆ ಬಿಟ್ಟುಹೋಗಿದೆ.
Leave a Reply